ಕಥಾಗುಚ್ಛ - ನಿರ್ಣಯ
ಬೀರಮ್ಮ ಹೊತ್ತಾರೆ ಎದ್ದು ಎಲ್ಲಾ ಕೆಲಸ ಮುಗಿಸಿ ಕೂಲಿಗೆ ಹೊರಟಳು . ನಿಂಗವ್ವ ಇನ್ನೂ ಹಟ್ಟಿಯ ಬಾಗಿಲನ್ನೇ ತೆರೆಯದಿರುವುದನ್ನು ಕಂಡು ಇವಳಿಗೇನಾಯಿತೆಂದು “ ನಿಂಗಿ , ನಿಂಗಿ ” ಎಂದು ಬಾಗಿಲನ್ನು ಕುಟ್ಟಿದಳು . ಒಳಗೆ ಕೆಟ್ಟ ಕನಸಿನಿಂದ ನರಳುತ್ತಿದ್ದ ನಿಂಗವ್ವ ದಢಾರನೆ ಎದ್ದು ಕುಳಿತಳು . ವಾಸ್ತವಕ್ಕೆ ಬಂದ ತಕ್ಷಣ ‘ ಇಷ್ಟೊತ್ತು ಕಂಡಿದ್ದು ಕನಸಾ ? ’ ಎಂದು ಸಮಾಧಾನಗೊಂಡಳು . ಎದ್ದು ಬಾಗಿಲನ್ನು ತೆರೆದಳು . “ ಯಾಕಮ್ಮಿ ಇನ್ನು ಬೆಳಗಾಗಿಲ್ವೆ ನಿಂಗೆ , ಇವತ್ತು ದೊಡ್ಡಮನೆಯವರ ಕಳ್ಳೆಕಾಯಿ ಬಿಡಿಸಕ್ಕೆ ಹೋಗ್ಬೇಕು . ಮರೆತು ಹೋಯ್ತಾ ? ” ಎಂದು ರಾಗ ತೆಗೆದಳು ಬೀರಮ್ಮ . “ ಇಲ್ಲ ಬೀರಮ್ಮ , ಯಾಕೋ ಚೆನ್ನಿ ಶ್ಯಾನೆ ಕನ್ಸಲ್ಲಿ ಬರ್ತಾವ್ಳೆ . ಪೇಟೇಲಿ ಕೂಸು ಏನ್ ಪಾಡು ಪಡ್ತಾವ್ಳೋ ಏನೋ . ಹೋಗಿ ನೋಡ್ಕಂಡು ಬತ್ತೀನಿ ” ಕುಗ್ಗಿದ ದನಿಯಲ್ಲಿ ಹೇಳಿದಳು ನಿಂಗವ್ವ . “ ಏನಾರ ಹೇಳೆ , ನೀ ಬಲು ಕಟುಕಿ , ಇರಾ ಒಂದು ಮಗೀನಾ ಪ್ಯಾಟೀಗ್ ಕಳ್ಸಿ ಅದೇನ್ ಜೀವ್ನ ಮಾಡ್ತಿದ್ದೀ ” ಎಂದು ಕಟಕಿಯಾಡಿ ಹೊರಟುಹೋದಳು . ಬೀರಮ್ಮನ ಮಾತು ನಿಂಗಿಗೆ ನೇರ ಎದೆಗೆ ಚುಚ್ಚಿದಂತಾಯಿತು . ಅವಳ ಕಣ್ಣಲ್ಲಿ ನೀರು ತನ್ನಂತಾನೇ ಚಿಮ್ಮಿತು . ಅಲ್ಲೇ ಬಾಗಿಲ ಬಳಿ ಕುಸಿದು ಕುಳಿತಳು . ನಿಂಗವ್ವನ ಗಂಡ ತೀರಿಕೊಂಡು ಒಂದು ವರ್ಷವಾಗಿತ್ತು . 10 ವರ್ಷದ ...