ಪುಸ್ತಕ ನೋಟ - ಹಗಲುಗನಸು
( ಗುಜರಾತ್ ನಲ್ಲಿ ಶಿಕ್ಶಣತಜ್ಞರಾದ ಗಿಜುಭಯ್ ಬಧೇಕಾರವರು ನಡೆಸಿದ ಸ್ವಂತ ಪ್ರಯೋಗದ ಆಧಾರದ ಮೇಲೆ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ ) ಒಬ್ಬ ಉತ್ಸಾಹಿ ಯುವ ಶಿಕ್ಷಣತಜ್ಞ ತಾನು ಅರಿತ ಸತ್ಯಾಂಶಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ದೃಢೀಕರಿಸಲು ನಾಲ್ಕನೇ ತರಗತಿಯ ಶಿಕ್ಷಕರಾಗಿ , ಒಂದು ಶಾಲೆಗೆ ಬರುತ್ತಾರೆ . ಬಲು ಆತ್ಮವಿಶ್ವಾಸದಿಂದ ಮೊದಲ ದಿನವೇ ಮಕ್ಕಳನ್ನು ತನ್ನ ಕೌಶಲ್ಯದಿಂದ ಮೋಡಿಗೊಳಿಸುತ್ತೇನೆ ಎಂದುಕೊಂಡು ತರಗತಿ ಪ್ರವೇಶಿಸುತ್ತಾರೆ . ಅಲ್ಲಿ ಕುಳಿತಿದ್ದ ಮಕ್ಕಳ ತುಂಟ ವರ್ತನೆ ಕಂಡು ಅವರ ಜಂಘಾಬಲವೇ ಉಡುಗಿಹೋಗುತ್ತದೆ . ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು , ‘ ಈಗ ಶಾಂತಿಯ ಆಟ ಆಡೋಣವೆಂದು , ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ , ಕತ್ತಲೆ ಮಾಡಿ , ‘ ಓಂ ಶಾಂತಿ ’ ಎಂದು ಹೇಳಿಕೊಡುತ್ತಾರೆ . ಮಕ್ಕಳೆಲ್ಲಾ ಕತ್ತಲಲ್ಲಿ ‘ ಹಾಂ , ಹೂ , ಓಂ ಎನ್ನುತ್ತಾ ಗದ್ದಲ ಮಾಡಿ ಜೋರಾಗಿ ಚಪ್ಪಾಳೆ ತಟ್ಟಿ ನಕ್ಕುಬಿಡುತ್ತಾರೆ . ಬೇಸತ್ತ ಯುವಕ ಮಕ್ಕಳಿಂದ ಮುಕ್ತಿ ಪಡೆಯಲು ರಜೆ ಘೋಷಿಸಿಬಿಡುತ್ತಾರೆ . ಅಂದು ತನಗಾದ ಅವಮಾನದಿಂದ ದಿನವೆಲ್ಲಾ ಅಶಾಂತಿಯಿಂದಲೇ ಕಳೆಯುತ್ತಾರೆ . ಇದೇ ಯುವಕ ಮುಂದೆ ಒಂದು ವರುಷದೊಳಗೆ , ಆ ಮಕ್ಕಳನ್ನೇ ತನ್ನ ಸಹನೆ ಮತ್ತು ಪ್ರೀತಿಯಿಂದ ತನ್ನೆಡೆಗೆ ಸೆಳೆದುಕೊಂಡು , ಅವ...