Posts

Showing posts with the label ಕವನ

ಕವನ - ಹುತಾತ್ಮ ಭಗತ್ ಸಿಂಗ್

Image
ನೀನೆಂದರೆ ಬಿಸಿ ನೆತ್ತರ ಧಗೆಯು ನೀನಲ್ಲವೆ ಬಿರುಗಾಳಿಯ ವೇಗವು ನೀನಾದೆ ಬ್ರಿಟಿಷರಿಗೆ ಸಿಂಹಸ್ವಪ್ನವು ನೀನೇ ಯುವಬಲದ ಮೂಲಾರ್ಥವು . ಕಡೆಗಣಿಸಿ ನಿನ್ನವರ ಧುಮುಕಿದೆ ಸ್ವಾತಂತ್ರ್ಯವನ್ನರಸಿ ಕ್ಷಣಕ್ಷಣವು ಪರಿತಪಿಸಿದೆ ದೌರ್ಜನ್ಯವ ನೆನೆಸಿ ದಬ್ಬಾಳಿಕೆಯೆದುರು ಅಬ್ಬರಿಸಿ ಹೆಬ್ಬುಲಿಯಾದೆ ಯುವಶಕ್ತಿಯನೆಚ್ಚರಿಸಿ ನೀ ಅಮರನಾದೆ . ಅರ್ಥಪೂರ್ಣ ನೀನು ಬದುಕಿದ ರೀತಿ , ಅಮೂಲ್ಯ ನಿನ್ನ ದೇಶಪ್ರೀತಿ , ಅಮೋಘ ನಿನ್ನ ಸಾಹಸವೃತ್ತಿ , ಅಪರೂಪ ನಿನ್ನ ಮಾನವಪ್ರೀತಿ . ಆದರೆ , ಮರೆತೇಹೋಗಿದೆ ಮರೆಯಾಗಿಯೇ ಹೋಗಿದೆ ಆ ಬಲಿದಾನ , ಅಳಿಸಿ ಹೋಗಿದೆ ಅರಿವಿನಲ್ಲಿರದಾಗಿದೆ ಆ ರಕ್ತದಾನ , ಮತ್ತಿನಲ್ಲಿದೆ ಮಾದಕತೆಯಲ್ಲಿ ಮುಳುಗಿದೆ ಈ ಯುವಜನ . ಜಡವ ತೊಲಗಿಸಲಿ ಜನರಲ್ಲಿ ನಿನ್ನ ನೆನಪು ಭಯವೇ ಬೆದರೋಡಲಿ ನೆನೆದಾಗ ನಿನ್ನ ಬದುಕು ಉತ್ಸಾಹವನುಕ್ಕಿಸಲಿ ನಿನ್ನ ಉಕ್ಕಿನೋಕ್ತಿಗಳು ಆವೇಶವನ್ನೆಬ್ಬಿಸಲಿ ನಿನ್ನ ಘೋಷಗಳು .

ಕವನ - ಮನುಜನಾಗು ಕಂದ

ಗರ್ಭದಾಗುಡಿಯಿಂದ ಮೆಲ್ಲಹೊರಬಂದ ಹೆದರದಿರು ಕಂದ ತಾಯಿ ಮಡಿಲಿಹುದು ಹಾಯಿ ಸುಖವಿಹುದು ತುಂಬಿದ ಮನೆಯಿಂದ ತೆವಳುತಾ ಬಂದ ಅಳುಕದಿರು ಕಂದ ನೆಲದ ಒಲವಿಹುದು ಹಿಡಿದು ನಡೆಸುವುದು ಐದು ತುಂಬಿದರಿಂದ ನಿನಗು ಸಾಲೆಗು ಬಂಧ ಬೆದರದಿರು ಕಂದ ಗುರುವೃಂದವಿಹುದು ಅರಿವು ನೀಡುವುದು ಓದು ಮುಗಿದುದರಿಂದ ಓಡು ಸತ್ಯದ ಹಿಂದ ಜಗವ ತಿಳಿ ಕಂದ ಮೌನ ತಾರೆಗಳಿಹವು ಏರು ಪರ್ವತಗಳಿಹವು ಪಡೆದೆ ನೀ ಲೋಕದಿಂ ಅರಿತೆ ನೀ ಜನರಿಂ ಬಿದ್ದೆ ನೀ ಬೆಳೆದೆ ನೀ ಎಲ್ಲ ಎಲ್ಲದರಿಂ ಮರಳಿ ನೀಡು ಮರೆಯದಿರು ಮನುಜನಾಗು ಮೃಗವೆನಿಸದಿರು

ಕವನ - ನಿರ್ಭಯಾ

Image
         ನಿರ್ಭಯಾ ಘಟನೆಗೆ ತಲ್ಲಣಿಸಿದ ಮನ ರಾತ್ರಿಯೆಲ್ಲ ನಿದ್ದೆ ದೂರಾಗಿ ಒದ್ದಾಡುತಿರುವಾಗ ಆ ತುಮುಲಗಳನ್ನೆಲ್ಲ ಹೊರಹಾಕಿದ ಪ್ರಯತ್ನವೇ ಈ ಕವನ , ನೊಂದ ಹೆಣ್ಣುಮಕ್ಕಳ ಆತ್ಮಗಳಿಗೆ ಅಂಕಿತ ಈ ಪದ್ಯ , ಹೋರಾಡುವ ಮನಗಳಿಗೆ ಅರ್ಪಣೆ ಈ ಕವನ ... ದಾರುಣವದು ದುರ್ದಿನದಲಿ   ದಾಂಡಿಗರ ದಾಂಧಲೆಯಲಿ   ಧ್ವಂಸಳಾದೆ ದಯೆತೋರದ   ದುಷ್ಟ ಜನರ ಧರೆಯಲಿ   ನೆತ್ತರಿನ ಮಡುವಿನಲಿ   ನೆಂದು ಹೋದರೂ ನೀನು   ನಂದಲಿಲ್ಲ ನಂಬಿಕಾಗ್ನಿ   ನರಳುತಿದ್ದರೂನು   ದೇಶವಿಡೀ ಕಂಪಿಸಿ   ದುರಂತಕಾಗಿ ದುಃಖಿಸಿ   ದಾಮಿನಿಯರ ದುರ್ಗತಿಯ   ದಾರಿಯನ್ನು ಅಳಿಸಿ ಎಂದು   ಬದುಕ ಬಯಸಿದೆ ನೀನು   ಛಲದಿ ಸಹಿಸಿದೆ   ಇಂದು ನಾಳೆ ಎಂದಾದರೂ   ಗೆಲುವೆ ಎಂದೆಣಿಸಿದೆ   ಆ ದುರುಳರ ದಮನವಿನ್ನು   ದೂರದಲ್ಲಿ ಇಲ್ಲವೆಂದು   ಧೂರ್ತರಿಗೆ ದಂಡವಂತು   ದೊರಕದಿರುವುದಿಲ್ಲವೆಂದು   ದಿನವು ದೂಡಿದೆ ನೀನು   ದಾರಿ ನೋಡಿದೆ   ಮತ್ತೇಕೆ ಮೌನವಾದೆ   ನಮ್ಮನೇಕೆ ದೂಡಿ ಹೋದೆ   ಓ ಗೆಳತಿ ಈ ಅಂತ್ಯವು   ಮುಗಿದಾ ಕಥೆಯಲ್ಲ   ಮೌನ ವಹಿಸಿ ಸ...

ಕವನ - ಪುರುಷನೂ ದಣಿದಿದ್ದಾನೆ

Image
ತನ್ನಲ್ಲಿ ಕಸುವಿದ್ದರೂ ಸ್ತ್ರೀ ಕೋಮಲೆಯಂತೆ ನಟಿಸಿ   ಬಸವಳಿದಿರುವಂತೆ ಬೇನೆಯಲ್ಲೂ ಬಲಾಢ್ಯನೆಂಬ   ವೇಷ ಧರಿಸಿ   ಪುರುಷನೂ ದಣಿದಿದ್ದಾನೆ ತಿಳಿದವಳಾದರೂ ಹೆಣ್ಣು   ಮೌನ ವಹಿಸಿ ವಹಿಸಿ   ಮರುಗಿದಂತೆ ಎಲ್ಲ ಬಲ್ಲವನೆಂಬ ನಿರೀಕ್ಷಾಭಾರಕ್ಕೆ ಗಂಡೂ ಸಹ ಬಳಲಿ ಬೆಂಡಾಗಿದ್ದಾನೆ ಅಳುಮುಂಜಿಗಳೆಂಬ ಆರೋಪಕೆ ಅವಳು ಅಂಜಿರುವಂತೆ ಅತ್ತು ಹಗುರಾಗಲು   ಅವಕಾಶವೀಯದ ಸಮಾಜಕೆ ಅವನೂ ಸಹ ಹಿಡಿಶಾಪವಿತ್ತಿದ್ದಾನೆ ಇಲ್ಲಿ ವನಿತೆ   ವೃತ್ತಿ , ವೇತನವೆರಡರಲ್ಲು ತಾರತಮ್ಯದಿ ತಲ್ಲಣಿಸಿರೆ ಅಲ್ಲಿ ಒಬ್ಬನೇ ಸಂಸಾರವನ್ನಿಡೀ ಸಲಹಲು   ಹಲವು ರೀತಿ ಹೆಣಗುತ್ತಿದ್ದಾನೆ ಒಂದೆಡೆ ತಂತ್ರಜ್ಞಾನದಿ ಹೆಂಗಸು ತಾತ್ಸಾರವ ಕಂಡಂತೆ ಇನ್ನಂದೆಡೆ ತುತ್ತು ತಿನಿಸೊ ತೃಪ್ತಿಯನೆ   ಹೊಂದಲಿಲ್ಲ ಗಂಡಸು ಹೆಣ್ಣಿನದು ಸ್ವತಂತ್ರಕಾಗಿ   ಕಠಿಣ ನಡಿಗೆಯಾದರೆ ಗಂಡಸಿಗದು ಸುಲಭ ದೊರೆತು   ಅಮೂಲ್ಯ ಮೌಲ್ಯ ಕಳಕೊಂಡಿರೆ ಈ ಪಿತೃರಾಜ್ಯ ಈರ್ವರಿಗೂ ಪೀಡೆಯಾಗಿ ಪರಿಣಮಿಸಿರೆ ಸಮತೆ ಎಲ್ಲಿ ಬಂದೀತು ಪ್ರಗತಿ ಎಲ್ಲಿ ಕಂಡೀತು

ಕವನ - ಕಿತ್ತೂರಿನ ಚೆನ್ನಮ್ಮ

Image
ಕೆಚ್ಚೆದೆಯ ಕಲಿಹೆಣ್ಣು ಕಿತ್ತೂರಿನ ಚೆನ್ನಮ್ಮ ಕಿತ್ತುಕೊಳ್ಳಲಿಕ್ಕೆ ಬಂದ ಕಿಡಿಗೇಡಿಯ ಕಡಿಯಲಿಕ್ಕೆ ಕತ್ತಿಯನ್ನ ಕೈಯಲಿಡಿದು ಕಾಳಗದಲಿ ಕಾದಾಡಿ ಕುತಂತ್ರಿಯ ಕುದ್ರೋಹಕೆ ಕೆಳಗುರುಳಿ ಕೊಸರಾಡಿ ಕೊನೆಗೂ ಕಿತ್ತೂರನ್ನು ಕಳೆದುಕೊಂಡೆವೆಂದು  ಕನ್ನಡಕಲಿಕುಲಕನ್ಯೆಯು , ಕಣ್ಮಣಿಯು ಕಾಪಿಡುತ್ತ ಕಾರಾಗೃಹದಲೇ ಕೊರಗುತ್ತಾ ಕಣ್ಮುಚ್ಚಿದಳು

ಕವನ - ಸ್ಕಂದಗಿರಿಯ ತುದಿಯೇರಿ

Image
ಸ್ಕಂದಗಿರಿಯ ತುದಿಯೇರಿದ ಮೇಲೆ ಮೂಡಿಸಿದೆವು ವಿಜಯ ಚಿತ್ರಮಾಲೆ ಬಾನು ಭುವಿಯ ಮಧ್ಯೆ  ಮೋಹಕ ಮುಗಿಲಬಲೆ ರವಿಯೇರುವಾಗ ರಂಗೇರಿತು ಮೂಡಣನೆಲೆ ಬೆಳಕಿನ ವಿಧವಿಧ ಕುಸುರಿನಕಲೆ ಈಗಲೂ ನೆಲೆಸಿದೆ ನಯನದಲೆ ಅಲ್ಲಿ ಅನಿಸಿಸುದೇನೆಂದರೆ ಅದು ಏನೇ ಇರಲಿ ಬಯಸಿರಿ ಬದುಕಲಿ ಕನಸಿರಿ   ಕಣ್ಣಲಿ ಮುಂದೊಂದು ದಿನ ಬರುವುದು ಕಡುಕತ್ತಲಲೂ ದಾರಿ ಕಾಣುವುದು ಕಟ್ಟಡವಿಯಲೂ ಆಸರೆ ಸಿಗುವುದು ಕಲ್ಲು ಮುಳ್ಳು ಹಾನಿಮಾಡದು ಏರು ಜಾರುಗಳು ಎತ್ತಿ ಹಿಡಿವುದು ಕೊರೆಚಳಿಯೂ ಬಳಿಸಾರದು ಅಂತಿಮವಾಗಿ ಗುರಿಯ ಗಿರಿಯು ನಿನ್ನ ಕಾಲಕೆಳಗಿರುವುದು ಬಯಸಿದ್ದು ದೊರಕಿ  ಮನವು ಕುಣಿಯುವುದು

ಕವನ - ರಟ್ಟೇಲಿನ್ನು ಕಸುವೈತೆ

Image
ಹುಟ್ಟಾಕಿಲ್ಲ ....ಅಪ್ಪ ಹೆಣ್ಣೆಂದು ಕೊಟ್ಬಿಟ್ಟ ಕಟ್ಕೊಂಡೋನು ದುಡಿಯೋ ಎತ್ತಂಗೆ ನೋಡ್ಬಿಟ್ಟ ಹುಟ್ದೋನು ಮೊಮ್ಮಕ್ಕಳ ಸಾಕಕ್ಕೆ ಇರಲಿ ಅಂದ್ಬಿಟ್ಟ ಮನ್ಸು ಕಲ್ಲಾಗೈತೆ ರಟ್ಟೇಲಿನ್ನು ಕಸುವೈತೆ ಬಂದದ್ದೆ ದಾರಿ....ಹೋಗ್ತಿರ್ತೀನಿ - ಉಷಾಗಂಗೆ 

ಕವನ - ಸುಬ್ಬಿ ಸುಬ್ಬಿ ಸುಬ್ಬಕ್ಕ

Image
ಸುಬ್ಬಿ ಸುಬ್ಬಿ ಸುಬ್ಬಕ್ಕ ಸೀ ಮಾತಿನ ಮಲ್ಲಕ್ಕ ಏನ ಮಾಡುವೆ ಚಿಟ್ಟಕ್ಕ ಓಡಿ ಬಾರೆ ಪುಟ್ಟಕ್ಕ ತೊಡೆಯನೇರುತ ಮೆಲ್ಲತುಳಿಯುತ ಅರಳೆಯ ತೋಳಲಿ ಕೊರಳನು ಬಳಸುತ ಮುತ್ತನು ನೀಡೆ ನನ್ನ ಅಪ್ಪುತ ಹತ್ತಿರ ಬಾರೆ ಪುಟ್ಟಕ್ಕ ಉಣ್ಣಲು ಮಾಡದೆ ರಂಪಾಟ ಉಂಡರೆ ಕೊಡುವೆ ಗಾಳಿಪಟ ಉಪ್ಪಿನ ಮೂಟೆ ಮಣ್ಣಿನ ಕೋಟೆ ಆಡುವ ಬಾರೆ ಅಚ್ಚಕ್ಕ ನೆತ್ತಿಗೆ ಬೆರಳಿನ ಕೋಡು ಸಿಕ್ಕಿಸಿ ಢಿ ಢಿ ಢಿಕ್ಕಿ ಮೆತ್ತನೆ ಬಾರಿಸಿ ಅವ್ವಾಲಕ್ಕಿ ಸಾರಿಸಿ ಗುಡಿಸಿ ನಿನಗಿಷ್ಟವಲ್ಲವೆ ನನ್ನಕ್ಕ ದೂರಿ ದೂರಿ ನಿನ್ನ ತೂಗಿಸಿ ಚಿಮಣಿ ಕತ್ತಲ ಗುಮ್ಮನ ತೋರಿಸಿ ಅಮ್ಮನ ಸೀರೆಯ ಜೋಳಿಗೆ ಪೇರಿಸಿ ಪಾಚಲು ಬಾರೆ ಬುಜ್ಜಕ್ಕ - ಉಷಾಗಂಗೆ