Posts

Showing posts from November, 2018

ಕವನ - ಹುತಾತ್ಮ ಭಗತ್ ಸಿಂಗ್

Image
ನೀನೆಂದರೆ ಬಿಸಿ ನೆತ್ತರ ಧಗೆಯು ನೀನಲ್ಲವೆ ಬಿರುಗಾಳಿಯ ವೇಗವು ನೀನಾದೆ ಬ್ರಿಟಿಷರಿಗೆ ಸಿಂಹಸ್ವಪ್ನವು ನೀನೇ ಯುವಬಲದ ಮೂಲಾರ್ಥವು . ಕಡೆಗಣಿಸಿ ನಿನ್ನವರ ಧುಮುಕಿದೆ ಸ್ವಾತಂತ್ರ್ಯವನ್ನರಸಿ ಕ್ಷಣಕ್ಷಣವು ಪರಿತಪಿಸಿದೆ ದೌರ್ಜನ್ಯವ ನೆನೆಸಿ ದಬ್ಬಾಳಿಕೆಯೆದುರು ಅಬ್ಬರಿಸಿ ಹೆಬ್ಬುಲಿಯಾದೆ ಯುವಶಕ್ತಿಯನೆಚ್ಚರಿಸಿ ನೀ ಅಮರನಾದೆ . ಅರ್ಥಪೂರ್ಣ ನೀನು ಬದುಕಿದ ರೀತಿ , ಅಮೂಲ್ಯ ನಿನ್ನ ದೇಶಪ್ರೀತಿ , ಅಮೋಘ ನಿನ್ನ ಸಾಹಸವೃತ್ತಿ , ಅಪರೂಪ ನಿನ್ನ ಮಾನವಪ್ರೀತಿ . ಆದರೆ , ಮರೆತೇಹೋಗಿದೆ ಮರೆಯಾಗಿಯೇ ಹೋಗಿದೆ ಆ ಬಲಿದಾನ , ಅಳಿಸಿ ಹೋಗಿದೆ ಅರಿವಿನಲ್ಲಿರದಾಗಿದೆ ಆ ರಕ್ತದಾನ , ಮತ್ತಿನಲ್ಲಿದೆ ಮಾದಕತೆಯಲ್ಲಿ ಮುಳುಗಿದೆ ಈ ಯುವಜನ . ಜಡವ ತೊಲಗಿಸಲಿ ಜನರಲ್ಲಿ ನಿನ್ನ ನೆನಪು ಭಯವೇ ಬೆದರೋಡಲಿ ನೆನೆದಾಗ ನಿನ್ನ ಬದುಕು ಉತ್ಸಾಹವನುಕ್ಕಿಸಲಿ ನಿನ್ನ ಉಕ್ಕಿನೋಕ್ತಿಗಳು ಆವೇಶವನ್ನೆಬ್ಬಿಸಲಿ ನಿನ್ನ ಘೋಷಗಳು .

ಅನುವಾದಿತ ಕವನ - ಲಿಂಕನ್‌ರವರ ಪತ್ರ

Image
ತಮ್ಮ ಮಗನ ಶಾಲಾ ಮುಖ್ಯೋಪಾಧ್ಯಾಯರಿಗೆ ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ‌ ರವರ ಬರೆದಿದ್ದರೆನ್ನಲಾದ ಪತ್ರ ಗೌರವನೀಯ ಗುರುಗಳೇ , ನನಗೆ ಗೊತ್ತು , ನನ್ನ ಮಗ ಇದನು ಕಲಿಯಬೇಕೆಂದು - ಎಲ್ಲರೂ ಸತ್ಯವಂತರಲ್ಲವೆಂದು , ಎಲ್ಲರೂ ಪ್ರಾಮಾಣಿಕರಲ್ಲವೆಂದು ; ಆದರೆ ಅವನಿಗಿದನೂ ಕಲಿಸಿಕೊಡಿ - ಪ್ರತಿ ಠಕ್ಕನಿಗೋರ್ವ ಧೀರನಿರುವನೆಂದು , ಪ್ರತಿ ಸ್ವಾರ್ಥ ರಾಜಕಾರಣಿಗೋರ್ವ ನಿಸ್ವಾರ್ಥ ನಾಯಕನಿರುವನೆಂದು . ನನಗೆ ಗೊತ್ತು , ಇದಕೆ ಹೆಚ್ಚು ಸಮಯ ಬೇಕೆಂದು , ಆದರೂ ಕಲಿಸಿ ಅವನಿಗೆ - ದುಡಿದೊಂದು ರೂಪಾಯಿ , ದೊರೆತ ಐದಕ್ಕಿಂತ ಮಿಗಿಲೆಂದು . ಕಲಿಸಿ ಅವನಿಗೆ ಸೋಲುವುದನು , ಜೊತೆಗೆ ಜಯದಲಿ ಸುಖಿಸುವುದನು . ಸಾಧ್ಯವಾದರೆ ಕಲಿಸಿ ಅವನಿಗೆ ದೂರವಿರಿಸಲು ಅಸೂಯೆಯನು . ಸಾಧ್ಯವಾದರೆ ಕಲಿಸಿ ಅವನಿಗೆ ಮಂದಹಾಸದ ಮಹತ್ವವನು . ಕಲಿಯಲತಿ ಬೇಗ - ಪೀಡಕರನು ಸದೆಬಡಿವುದು ಸುಲಭವೆಂಬುದನು . ತಿಳಿಸಿರಿ ಅವನಿಗೆ , ಪುಸ್ತಕಲೋಕದ ವಿಸ್ಮಯವನು ; ಜೊತೆಗೆ , ಅರಿಯಲು ಕೊಡಿ ಸಮಯವನು - ಬಾನಂಗಳದ ಹಕ್ಕಿಗಳನು , ಹಗಲಿನ ದುಂಬಿಗಳನು , ಹಸಿರು ಬೆಟ್ಟದ ಸುಮಗಳ ನಿತ್ಯನೂತನ ಮರ್ಮವನು . ಕಲಿಸಿರಿ ಅವನಿಗೆ ಶಾಲೆಯಲಿ ವಂಚನೆಗಿಂತ ಫೇಲಾಗುವುದೇ ಮೇಲೆಂದು . ಎಲ್ಲರೂ ತಪ್ಪೆಂದರೂ , ತನ್ನ ವಿಚಾರಗಳಲಿ ದೃ...

ಕವನ - ಮನುಜನಾಗು ಕಂದ

ಗರ್ಭದಾಗುಡಿಯಿಂದ ಮೆಲ್ಲಹೊರಬಂದ ಹೆದರದಿರು ಕಂದ ತಾಯಿ ಮಡಿಲಿಹುದು ಹಾಯಿ ಸುಖವಿಹುದು ತುಂಬಿದ ಮನೆಯಿಂದ ತೆವಳುತಾ ಬಂದ ಅಳುಕದಿರು ಕಂದ ನೆಲದ ಒಲವಿಹುದು ಹಿಡಿದು ನಡೆಸುವುದು ಐದು ತುಂಬಿದರಿಂದ ನಿನಗು ಸಾಲೆಗು ಬಂಧ ಬೆದರದಿರು ಕಂದ ಗುರುವೃಂದವಿಹುದು ಅರಿವು ನೀಡುವುದು ಓದು ಮುಗಿದುದರಿಂದ ಓಡು ಸತ್ಯದ ಹಿಂದ ಜಗವ ತಿಳಿ ಕಂದ ಮೌನ ತಾರೆಗಳಿಹವು ಏರು ಪರ್ವತಗಳಿಹವು ಪಡೆದೆ ನೀ ಲೋಕದಿಂ ಅರಿತೆ ನೀ ಜನರಿಂ ಬಿದ್ದೆ ನೀ ಬೆಳೆದೆ ನೀ ಎಲ್ಲ ಎಲ್ಲದರಿಂ ಮರಳಿ ನೀಡು ಮರೆಯದಿರು ಮನುಜನಾಗು ಮೃಗವೆನಿಸದಿರು

ಚುಟುಕಗಳು -

ಚುಟುಕ - ೧ ದಟ್ಟಡವಿಯ ಮೌನ ಘೋರ ಝೇಂಕಾರ ಅಗಾಧ ಸಾಗರ ಮೌನ ಕ್ರೂರ ಸುಂದರ ಏರುಪರ್ವತದ ಮೌನ ಕಠೋರ ಗಂಭೀರ ಮೌನ ಕೋಮಲವೂ ಮೌನ ಕಾಠಿಣ್ಯವೂ ಚುಟುಕ - ೨ ನಿಸರ್ಗ ಸೌಂದರ್ಯಕೆ ನಾನು ಸದಾ ದಾಸ ಅದಕೆ ಪ್ರವಾಸ ನನ್ನ ಹವ್ಯಾಸ ಕಾಡು ಬೆಟ್ಟ ರೋಹಣಕೆ ಬಾಯಸುವೆನು ಮನಸಾ ಇದಕೆ ಇರಬೇಕು ಧೈರ್ಯಸಾಹಸ ಚುಟುಕ - ೩ ಹೊಂಗೆ ಹೂವ ಸುರಿಯುತಲೆ ಚಿಗುರು ತಂಪುನೀಡುತಿರೆ ಕಹಿ ಸಿಹಿಯೊಳಿಟ್ಟು ತಿನುವ ಕಲೆ ಬಾಳ ಗುಟ್ಟು ತಿಳಿ ಎನುತಲೆ ನಮಯುಗಾದಿ ನವಯುಗಾದಿ ಮತ್ತೆ ಮರಳಿ ಬಂದಿತಲೆ

ಸ್ವಾನುಭವ - ಸ್ನೇಹ ಸಾಮರಸ್ಯ

Image
ಗೆಳತಿ ಸಮೀನಾ ಮನೆಗೆ ಹೋಗಿದ್ದೆ ..... ಈ ಸ್ನೇಹ ತೀರ ಇತ್ತೀಚಿನದ್ದಾದರೂ ಮೊದಲ ಭೇಟಿಯಲ್ಲೆ ಸಮೀನಾ ಅದರಲ್ಲು ಅವರ ತಾಯಿಯ ನಿಷ್ಕಲ್ಮಶ ಪ್ರೇಮಕ್ಕೆ ಮನಸ್ಸು ಫಿದಾ ಆಗಿತ್ತು ...... ನನ್ನ ಮದುವೆ ನಿಶ್ಚಯದ ವಿಷಯ ಕೇಳಿ ಸ್ವಂತ ಮಗಳ ಮದುವೆಯೇನೊ ಎಂಬಂತೆ ಸಂತೋಷಪಟ್ಟರು . ತಿಂಡಿ ಪಾನಕಗಳಿಂದ ಉದರವನ್ನು , ಪ್ರೀತಿ ಮಮತೆಯಿಂದ ಹೃದಯವನ್ನು ತುಂಬಿದರು ..... ಹರಸಿದರು . ಅವರೊಂದಿಗೆ ಇದ್ದಷ್ಟು ಹೊತ್ತು ನನಗೆ ಕಂಡಿದ್ದು ಒಂದೇ ..... ಅವರ ಸರಳ ಸಹಜ ಪ್ರೀತಿ . ಅದು ಬಿಟ್ಟರೆ ಅವರ ಧರ್ಮ , ಬುರ್ಖಾ , ಕುಂಕುಮವಿರದ ಹಣೆ ಇವಾವುದು ಕಾಣಲೇ ಇಲ್ಲ . ಸಾಮರಸ್ಯ ಬೆಳೆಯಲು ಇದಕ್ಕಿಂತ ಹೆಚ್ಚಿನದೇನಿರಬೇಕೊ ತಿಳಿಯದು .  ಈ ಸಮಯದಲ್ಲಿ ನನ್ನಜ್ಜಿ ಹೇಳಿದ ಕಥೆಯೊಂದು ಇಲ್ಲಿ ನೆನಪಾಗುತಿದೆ ಆಕೆ ಚಿಕ್ಕ ಹುಡುಗಿಯಾಗಿದ್ದಾಗ ದರ್ಗಾದಲ್ಲಿ ವರುಷಕ್ಕೊಮ್ಮೆ ನಡೆಯುವ ಉತ್ಸವದಲ್ಲಿ ಬಲು ಉತ್ಸಾಹದಿಂದ ಭಾಗವಹಿಸುತ್ತಿದ್ದರಂತೆ .... ಪವಿತ್ರಾಕ್ಷರಗಳ ಲೋಹಬಿಲ್ಲೆಗಳನ್ನು ಹೊತ್ತು ಊರೆಲ್ಲ ಸುತ್ತಾಡಿ ಅಗ್ನಿಕುಂಡದಲ್ಲಿ ಹಾಯುತ್ತಿದ್ದರಂತೆ ... ಹೀಗೊಂದು ದಿನ ನಮ್ಮಜ್ಜಿ ಹಂದಿ ಮಾಂಸವನ್ನು ತಿಂದು ಮಲಗಿದಾಗ ಕನಸಲ್ಲಿ ಆ ದೇವರು ಬಂದು ಕೆನ್ನೆಗೆ ಬಾರಿಸಿದ್ದರಂತೆ ( ಆಕೆಯ ಮನದ ಭಯ ಕನಸಾಗಿದೆಯೆಂದು ತಿಳಿಯದಷ್ಟು ಅಮಾಯಕತನ ) ಮರುದಿನವೇ ಅಜ್ಜಿ ದ...