ಕವನ - ನನ್ನಜ್ಜಿ ಬಲು ಖಿಲಾಡಿ


ನನ್ನಜ್ಜಿ ಬಲು ಖಿಲಾಡಿ
ಎಂಭತ್ತರಲ್ಲೂ ಎತ್ತಿನ ಗಾಡಿ

ಒಂದೆಡೆ ಸುಮ್ಮನೆ ಕೂರಳು
ಕಾಲುಗಳಾ ಅವು ಗಾಲಿಗಳು

ಈಗಲೂ ಗಟ್ಟಿ ಹಲ್ಲಿನಕಟ್ಟು
ಇರಲೇಬೇಕು ಚಕ್ಲಿ ನಿಪ್ಪಟ್ಟು

ಕೆಲಸವಿರದಿರೆ ಟಿವಿ ಹಚ್ಚು
ತೆಲಗು ಮಹೇಶನೇ ಬಲು ಮೆಚ್ಚು

ಸೆಲ್ಫೋನ್ ಲ್ಯಾಪ್ಟಾಪ್ ಯಾವುದೆ ಇಕ್ಕು
ಒಲ್ಲೆ ಎನ್ನಳು ಭಲೆ ಟೆಕ್ಕು

ಈಗಲೂ ಸೂಜಿಗೆ ದಾರ ಹಚ್ಚುವಳು
ಬಿಂದಿಗೆ ನೀರನು ಹೊತ್ತು ತರುವಳು

ಮಾಡದಿರೆಂದರೆ ಮುಖಹನುಮಂತ
ಮಾಡುವುದೊಂದೆ ನಿತ್ಯದ ಮಂತ್ರ

ಏನೆಅಂದರೂ ನಗುವೇ ಉತ್ತರ
ಕೆಡುಮಾತುಗಳು ಸುಳಿಯದು ಹತ್ತಿರ

ಬಯಕೆಯೊ ಅವಳದು ಮನೆಯಲಿ ಸಂತಸ
ನಾವುಗಳೆಂದರೆ ಪಂಚಾಮೃತ ರಸ

ಕಷ್ಟಗಳಿಂದಲೇ ಇಲ್ಲಿಗೆ ಪಯಣ
ನಿತ್ಯವಿತ್ತು ಕಣ್ಣೀರಾಭರಣ

ಎಲ್ಲವ ಮರೆತು ಎಲ್ಲರ ಕ್ಷಮಿಸಿ
ಒಳಿತನೆ ಕೋರ್ವಳು ದೈವಕೆ ನಮಿಸಿ

ನೋಡೆನು ಅಂಥ ಅಪರೂಪದ ಅಜ್ಜಿಗೆ
ಬೆರಗಾಗಿ ನಮಿಸುವೆ ಆ ಅಕಾಶಗಂಗೆಗೆ


Comments

Popular posts from this blog

ಅನುವಾದಿತ ಕವನ - ಲಿಂಕನ್‌ರವರ ಪತ್ರ

ಕವನ - ಹುತಾತ್ಮ ಭಗತ್ ಸಿಂಗ್

ಚುಟುಕಗಳು -