ಕವನ - ಎದ್ದರು ಎಬ್ಬಿಸಿದರು
ತಾಯಿ ಭಾರತಿಗೆಲ್ಲಿತ್ತೊ ಇಷ್ಟು ಪುಣ್ಯ
ಜನನಿ ಭುವನೇಶ್ವರಿ ಶಕ್ತಿಗರ್ಭಾರಣ್ಯ
ದಲಿ ಜನ್ಮವೆತ್ತನೋ ಅಗ್ರಪುತ್ರಗಣ್ಯ
ಮಾತೆಗಳಿಬ್ಬರು ಹೆಣೆದ ಬತ್ತಿಯ ಭವ್ಯ
ಜ್ಯೋತಿತಾನಾಗಿ ಬೆಳಗಿ ತಂದ ನವ್ಯ.
ಸಂಚರಿಸಿದಲ್ಲೆಲ್ಲ ಉಜ್ವಲ ದಿವ್ಯ
ದೇವರನರಸುತ ದೇಶವನರಿತ
ನರರ ನೋವಿಗೆ ತಾನು ಮರುಗುತ
ತನ್ನ ಕಾಯಕವ ಅರಿಯಲು ಕುಳಿತ
ಜಟಿಲಪ್ರಶ್ನೆಗಳ ಬಿಡಿಸಿಕೊಂಡ
ಜನತರಿಗಂಟಿದ ಜಾಡ್ಯ ಕಂಡ
ಜಾತಿ ಮೌಢ್ಯಗಳಿಗೆ ಬಾಣ ಕಂಡ
ಹಳೆಯ ಧರ್ಮವ ಮರುಸ್ಥಾಪಿಸಿ
ಸೋಂಕಿನ ಅಂಗವ ಸರಿಕತ್ತರಿಸಿ
ಬೆರೆಯುತ ಜಗವ ಪ್ರೀತಿಯ ಕಲಿಸಿ
ಸರ್ವಧರ್ಮಗಳ ಶರೀರವಾಗಿಸಿ
ಅದರಸಾರವನು ಅಂಗಕೆ ಹೋಲಿಸಿ
ಮಾನವೀಯತೆಯೇ ಅಂತಿಮವೆನಿಸಿ
ಮಾತೃ ಭ್ರಾತೃ ಪ್ರೇಮವ ಅಖಂಡಗೊಳಿಸಲು
ಮನೆ ತೊರೆದ ಎಲ್ಲ ಅಲೆದ
ನಿದ್ದೆ ಮರೆತ ಹೊಟ್ಟೆ ಕಟ್ಟಿದ
ಪಾದಸವೆಸಿದ ಬಿಸಿಲಲಿ ಬೆಂದ
ವಿದೇಶಿ ನಾಡಲ್ಲಿ ಪರದೇಶಿ ತಾನಾಗಿ
ನೆಲೆಗಾಣದೆ ದಾರಿಯಲೇ ಮಲಗಿದ
ಎದ್ದ
ಎಬ್ಬಿಸಿದ
ಸಿಡಿಲ ವಿದ್ಯುತ್ವಾಣಿಯಿಂದ
ಪ್ರಪಂಚವನೇ ಎಚ್ಚರಿಸಿದ

Comments
Post a Comment