ಕವನ - ಭಾನುದಿನವೇ ಅವನ ದರ್ಶನ
ಭಾನುವಾರವೆ
ಅವನ
ಪೂರ
ದರ್ಶನ
ಸೋಕಿ
ಉಷಾಕಿರಣ
ನೂಕಿ
ನಿಶೆಯ ಹರಣ
ಮೋಡ
ಓಡಿ ಕಳೆದು ಕತ್ತಲು
ರವಿಮೂಡಿ
ಬೆಳಗಿ ಎತ್ತಲು
ಕೋಟಿ
ಕ್ರಿಮಿಕೀಟಕು
ಸಕಲ
ಸಸ್ಯರಾಶಿಗು
ಸುಖಸ್ಪರ್ಶ
ಎಲ್ಲಕು
ಮಿಗಖಗಕೆ
ರೆಕ್ಕೆಮೊಳೆತು
ಬಿಸಿಲಸ್ನಾನದಿ
ಶಕ್ತಿ ಪಡೆದು
ಮಳೆ
ತೊಳೆದಮೇಲೆ ಇಳೆ
ದಿಗಂತಕೆ
ಹೊಳಪಿನ ಕಳೆಬೆಳೆದು
ದಪ್ಪನೂಲಿನ
ಸ್ವೆಟರಲಿ
ಹುದುಗಿದ್ದ
ತೊಗಲಿಗೂ
ಬಿಡುಗಡೆಯ
ಕಾಂತಿಯುತ ನಗು
ಕೊಡವಿ
ಜಗವೆದ್ದು
ನಿತ್ಯಕರ್ಮದಲಿ
ಮುಳುಗಿ
ಮರಳಿತು
ಕಾಣೆಯಾಗಿದ್ದ ಸದ್ದು
ಪ್ರತಿನಿತ್ಯದ
ಗೋಳನ್ನು
ದಿನನಿತ್ಯದ
ಜಂಜಾಟವನ್ನು
ಬಯಸುವಂತಾಗಿಸಿದ
ಮಳೆಯನ್ನು
ಸದಾ
ಕಾಣುವ ಸಹಜವಾದುದನ್ನು
ಕಡೆಗಣಿಸುತ್ತಿದ್ದ
ಸಣ್ಣ ಪುಟ್ಟದನ್ನು
ಮಹತ್ವಗೊಳಿಸಿದ
ಮೋಡವನ್ನು
ಅಣುವಿನಲಣುವಾದ
ಈ ಮನವು
ಮನದಲೆ
ನಮಿಸುವುದು

Comments
Post a Comment