ಕವನ - ವೇಣುಗಾನಮಯ
ಎಂದಿನಂತಲ್ಲದೆ
ಅಂದು ಮುಂಚೆಯೇ
ಸೇರಿದಳು ನದಿಯ ತೀರವ
ಎಂದಿನಂತಲ್ಲದೆ
ಅಂದು ಮುರಿದ ತರಗೆಲೆಯೂ
ನದಿಅಲೆಯು ನೀಡಿತು ಸಂಗೀತವ
ಎಂದಿನಂತಲ್ಲದೆ
ಅಂದು ನೀರಿಗಿಳಿದಾಗ
ಕಚಗುಳಿಯ ಹಿತಾನುಭವ
ಕೊಡಹಿಡಿದು
ಏಷ್ಟೊತ್ತು ನಟಿಸಿದಳೋ
... ನೀರ್ತುಂಬುವುದು ಚೆಲ್ಲುವುದು
ಸುತ್ತಮುತ್ತಲನ್ನೊಮ್ಮೆ
ಧೀರ್ಘ ಧ್ಯಾನಿಸಿದಳು
ಅವನಿರುವಿಕೆ ಬರುವಿಕೆಯ
ನಯನ ಅಲ್ಲಿ ಇಲ್ಲಿ
ಕರ್ಣ ಕಾತರದಲ್ಲಿ
ಸಾಂಗತ್ಯ ನೀಡುವ ಆ ನಾದವೆಲ್ಲಿ
🎶🎼🎶🎼🎶
ಅದೋ ತೇಲಿಬಂತು
ಕೋಕಿಲ ಸ್ವರ ಭ್ರಮರ ಝೇಂಕಾರ
ಮಿಳಿತ ನಿನಾದಬಂತು
ಗೊಲ್ಲನೊಲವು ಉಸಿರಾಗಿ
ಉಸಿರು ಕೊಳಲೊಡಲುತಾಗಿ
ಬೆರಳತಾಳಕೆ ಬಳುಕಿ ಬಾಗಿ
ಗಾಳಿಯಲೆಯಾಗಿ
ಸುಮದಳತೂಗಿ
ಮಧು ಸವಿಯಲಾಗಿ
ಹೊನ್ನೆಲೆಗಳ ದಾಟಿ
ಹಿಮಮಣಿಯ ಮೀಟಿ
ಮಧುರದನಿ ನಾಟಿ
ವೇಣುಸುಧಾಗಾನಮಯ ವನವೆಲ್ಲ
ಅವಳತನು ಮನವೆಲ್ಲ
ಸಮ್ಮೋಹ ಮಾಯೆಯಲಿ
ಶೂನ್ಯ ಜಂಜಾಟವೆಲ್ಲ

Comments
Post a Comment